My Blog List

Wednesday, 24 September 2014

ನಂದನದ ತುಣಕು


ವಿಶ್ವದ ಹಲವು ಹೃದಯಗಳು ಮಿಡಿಯುತಿವೆ. ಮೈಸೂರಿನತ್ತ  ಹೆಜ್ಜೆ ಇಡುತಿವೆ. ಕಾರಣ ಬಚ್ಚಿಟ್ಟ ಚಾಕಲೇಟ್ ಅಲ್ಲ. ಬಿಚ್ಚಿಟ್ಟ ಬೊಂಬಾಯಿ ಮಿಠಾಯಿ. ಸವಿದಷ್ಟೂ ರುಚಿ. ನೋಡಿದಷ್ಟೂ ಹಿತ. ಅದುವೇ ದಸರ. ಮೈಸೂರು ದಸರ. ಎಷ್ಟು ಕಣ್ ಬೇಟವೋ ಅಷ್ಟೂ ಮೈಸೂರು ಮನಸೂರೆಗೊಳ್ಳುತಿದೆ.


ಹೀಗೆ, ನನ್ನೂರಿನ ನೆಲದಲ್ಲೇ ಇದೆ ಬೇಸಿಗೆ ಅರಮನೆ. ಅದು ವಸಂತಮಹಲ್. ಇಲ್ಲಿ ನಂದನದ ತುಣಕು ಬಿದ್ದಿದೆ. ಅರ್ಥಾತ್ ಹೂ ಚೆಲುವೆಲ್ಲಾ ತಂದೆಂದಿದೆ. ಮಕರಂದದ ಅರಿಶಿಣದಿ-ಭುವನೇಶ್ವರಿ ಕುಂಕುಮದಿ...ಬಗೆಬಗೆಯ ಬಣ್ಣದಿ ಮೈದಳೆದು ಚೆಲುವಿನ ಚಿತ್ತಾರ ಬರೆದಿವೆ ಹೂರಾಶಿ

ಇಲ್ಲಿ ಚೆಂಡುಹೂ, ಬೆಟ್ಟದ ತಾವರೆ.ಜೀನಿಯಾ, ಕಾಕ್ಸ್ ಕೂಂಬ್ , ಸೆಲೋಷಿಯಾ, ಹಾಸ್ಟರ್, ಗುಂಡು ರಂಗು, ಬಿಂದಿಗೆ ಹೂವು, ಕರ್ಣಕುಂಡಲ, ಗೈ ಲಾರ್ಡಿಯಾ, ಸಾಲ್ವಿಯಾ, ರೆಡ್ ಸಾಲ್ವಿಯಾ,..ಹೀಗೆ ಹಲವು ಭಾಷೆಯ-ಹಲವು ಬಣ್ಣದ-ಹಲವು ಜಾತಿಯ ಹೂಗಳಿದ್ದು, ವೈವಿಧ್ಯತೆಯಲ್ಲಿ ಏಕತೆ ಸಾರುತಿವೆ. ಒಂದಕ್ಕೊಂದು ಪೈಪೋಟಿ ಮೆರೆಯುತಿವೆ.


ಬೆಳಕು ಸರಿದಂತೆ, ಇರುಳ ಸೆರಗಿಗೆ ದೀಪದ ಅಂಚು ವಸಂತಮಹಲಿನ ಸೊಬಗನ್ನು ಇಮ್ಮಡಿಗೊಳಿಸಿದೆ.



ಅಂದಹಾಗೆ ನಮ್ಮ ಪ್ರಾಚರ್ಯರಾದ ಬಿ.ಕೆ.ಬಸವರಾಜರವರು & ಉಪನ್ಯಾಸಕರಾದ ಹೆಚ್.ಬಿ.ನಿಂಗಯ್ಯರವರ ಮಾರ್ಗದರ್ಶನದಲ್ಲಿ ದಣಿವರಿಯದೆ ದುಡಿವ ಈಶ್ವರನ ದುಡಿಮೆ ಫಲವಿದು. ಇಷ್ಟೇ ಒಲವು ಡಯಟಿನ ಎಲ್ಲ ಉಪನ್ಯಾಸಕರದ್ದು. ಹೀಗೆ, ಪರಿಶ್ರಮ,ಆಸ್ಥೆ,ಒಲವು ಬೆರೆತು ನಂದನ ವನದಂತೆ ಮಿನುಗುತಿರುವ ಹೂಬನವ ನೋಡ ಬನ್ನಿ...ನಿಮಗಿದೋ ದಸರೆಗೆ ಸ್ವಾಗತ.

Sunday, 14 September 2014

ರೆಮ್ಸ್ ಕಾರ್ಯಾಗಾರ

ಅನುಪಾಲನೆ, ಬೇಕೇಬೇಕು. ಮಾಡುವ ಕೆಲಸದಲ್ಲಿ. ನೋಡುವ ನೋಟದಲ್ಲಿ. ನಡೆಯುವ ನಡಿಗೆಯಲ್ಲಿ. ಖುಷಿ ನೀಡೋ ಕೃಷಿಯಲ್ಲಿ. ಎಲ್ಲೆಲ್ಲೂ ಇದಿದ್ದರೆ ಒಳಿತು. ಇದರಿಂದ ಬೆಳೆ. ಮುದದಿಂದ ಕಳೆ(ಹೊಳಪು). ನಮ್ಮ ಇಲಾಖೆ ಇದಕ್ಕೆ ಹೊರತಲ್ಲ. ನಮ್ಮ ಅನುಪಾಲನೆ ಹೇಗೆ ಸಾಗಿದೆ ? ನಾವು ಎಲ್ಲಿದ್ದೇವೆ ? ನಾವೇನಾಗಬೇಕಿದೆ ? ಎತ್ತ ಸಾಗಬೇಕಿದೆ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟೆವು. ನಾವು ಸಾಗಿದ ಹಾದಿ ಡಿಎಂಜಿ ಹಳ್ಳಿ ತಲುಪಿತು. ಅದು ರೆಮ್ಸ್ ಅಧ್ಯಯನದ ಒಂದು ದಿನದ ಕಾರ್ಯಾಗಾರ.

 ಹಿಂದಿನ ರೆಮ್ಸ್ ಅಧ್ಯಯನದ ಒಳನೋಟ, ಮುಂದಿನ  ಅಧ್ಯಯನಗಳ ಕಣ್ಬೇಟ, ಇಲ್ಲಿ ಎಲ್ಲರನ್ನು ಒಗ್ಗೂಡಿಸಿತ್ತು. ಜವಹಾರ್ ನವೋದಯ ವಿದ್ಯಾರ್ಥಿನಿಯರು ಶುಶ್ರಾವ್ಯವಾಗಿ ವರಮಹಾಲಕ್ಷ್ಮಿಯನ್ನು ಪ್ರಾರ್ಥನೆಯೊಂದಿಗೆ ಕರೆದರು.

ಮೈಸೂರು ವಿಭಾಗದ ಸಹನಿರ್ದೇಶಕರಾದ ಶ್ರೀ ಚಾಮೇಗೌಡರು ಸರ್ಕಾರಿ ಶಾಲೆಗಳ ಅಂದಿನ ವೈಭವವನ್ನು ಸ್ಮರಿಸಿದರು. ಗುಣಮಟ್ಟಕ್ಕೆ ಆದ್ಯತೆ ನೀಡಲು ಹೇಳಿದರು.



 
ಮಧ್ಯಾಹ್ನ ಊಟದ ಸವಿ ಬಳಿಕ ಹೊರಗೆ ತಿಳಿಮೋಡ ಕಂಡಿತು. ಒಳಗೆ ಅರಿವುನೋಡ ಎಂದರು ಖಾದಿಯುಟ್ಟ ವ್ಯಕ್ತಿ. ಅವರೇ ವಿವೇಕಾನಂದ ಯೂತ್ ಮುಮೆಂಟ್ ನ  ಡಾ.ಬಾಲಸುಬ್ರಹ್ಮಣ್ಯರವರು. ಸಣ್ಣ ಸಣ್ಣ ವಿಚಾರಗಳಲ್ಲೂ ಶ್ರೇಷ್ಠತೆಯಿಡಿ ಎಂದರು. ಕನಸು ಕಾಣಿ. ಕನಸಿನಂತೆ ಕೆಲಸ ಮಾಡಿ ಎಂದರು. 
 
 
ರೆಮ್ಸ್ ನೋಡಲ್ ಅಧಿಕಾರಿ ಶ್ರೀಮತಿ ಮಂಜುಳ ರವರು ಪ್ರಾಸ್ತಾವಿಕ ನುಡಿಮುಂದಿಟ್ಟರೆ, ಮಾನ್ಯ ಪ್ರಾಂಶುಪಾಲರಾದ ಬಿ.ಕೆ.ಬಸವರಾಜರವರು ಅಧ್ಯಕ್ಷೀಯ ನುಡಿಯ ಜತೆ ತೆರೆ ಎಳೆದರು. ಆದರೆ ತೆರೆಗು ಮುನ್ನ ಉಪನ್ಯಾಸಕರಾದ ಪುಷ್ಪಲತಾರಿಂದ  ಕ್ಯುಎಂಟಿ, ಸ್ನೇಹಲತಾರಿಂದ ಕೆ.ಎಸ್.ಕ್ಯು.ಎ.ಎ.ಸಿ, ಶ್ರೀ ಸ್ವಾಮಿ .ಎಸ್ ರವರಿಂದ ಸಿಸಿಇಒಳನೋಟಗಳ ಅನಾವರಣವಾಯಿತು. ಶ್ರೀಮತಿ ತ್ರಿವೇಣಿಯವರ ನಿರೂಪಣೆ ಕಾರ್ಯಕ್ರಮವನ್ನು ಚೆಂದಗಾಣಿಸಿತು.

Saturday, 13 September 2014

ನೆನೆ ನೆನೆ ಆ ದಿನವಾ

ಶಿಕ್ಷಕ-ರಾಷ್ಟ್ರ ರಕ್ಷಕ. ಒಂದು ದೇಶದ ಭವಿಷ್ಯ ತರಗಿ ಕೋಣೆಯೊಳಗೆ ನಿರ್ಮಾಣಗೊಳ್ಳುತ್ತೆ. ಇತ್ಯಾದಿ ಇತ್ಯಾದಿ. ಮಾತು ಕೇಳಿದ್ದೇವೆ. ಕೇಳುತ್ತಿದ್ದೇವೆ. ಕೇಳುತ್ತಿರುತ್ತೆವೆ. ಇದು ಸತ್ಯ. ಹಾಗಾಗಿಯೇ ಸತ್ಯಧ್ವನಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿರುತ್ತೆ. ಹೀಗೆಯೇ ಸತ್ಯಧ್ವನಿ ಪ್ರತಿಧ್ವನಿಸಿದ್ದು ಶಿಕ್ಷಕರ ದಿನಾಚರಣೆಯಲ್ಲಿ. ಈ ವರ್ಷದ ಶಿಕ್ಷಕರ ದಿನ ಇತಿಹಾಸ. ಕಾರಣ ನಿಮಗೆ ತಿಳಿದಿದೆ. 

ಇದು ಈ ದೇಶದ ಇತಿಹಾಸದಲ್ಲೇ ಮೊದಲು. ದೆಹಲಿಯ ಮಾಣಿಕ್ ಷಾ ಸಭಾಂಗಣ ಎಲ್ಲ ಸುದ್ದಿವಾಹಿನಿಗಳಲ್ಲಿ ವಿಜೃಂಭಿಸಿತು. ಭವ್ಯಭಾರತದ ಕನಸುಗಳು ಕಣ್ತೆರೆದವು, ಕಣ್ತೆರೆಸಿದವು. ಮಧ್ಯಾಹ್ನ 3.00 ಗಂಟೆಯಿಂದ 4.45ರವರೆಗೆ ಮನೆಮನೆಳಲ್ಲಿ ಮಕ್ಕಳ ಪ್ರಶ್ನೆ ಪ್ರತಿಫಲಿಸಿದವು.

ಶ್ರಿ ನರೇಂದ್ರ ಮೋದಿಯವರ ಮಾತುಗಳನ್ನು ಹಿಡಿದಿಡುವುದಾದರೇ…
-      ದೇಶೋದ್ಧಾರಕ್ಕೆ ದೊಡ್ಡ ದೊಡ್ಡ ಕನಸುಬೇಕಿಲ್ಲ. ಪುಟ್ಟ ಪುಟ್ಟ ಆಲೋಚನೆ ಸಾಕಾರಗೊಳಿಸಿ
-      ಸಣ್ಣ ಕೆಲಸಗಳೊಂದಿಗೆ ಕೈ ಜೋಡಿಸಿದರೇ ಅದು ಶ್ರೇಷ್ಠ ದೇಶಸೇವೆ.
-      ಮೇರು ವ್ಯಕ್ತಿಗಳ ಜೀವನಚರಿತ್ರಯಿಂದ ಸತ್ಯದರ್ಶನ, ಬದುಕಿನ ಮೌಲ್ಯದ ಅರಿವು ಸಾಧ್ಯ.
-      ಅಂಗೈಯಲ್ಲೇ ವಿಶ್ವ ತೆರೆದಿಡುವ ಗೂಗಲ್ ಬರಿ ಮಾಹಿತಿ ನೀಡುವುದೇ ವಿನಃ ಜ್ಞಾನವನ್ನಲ್ಲ.
-      ಅದೇನೇ ಅಡ್ಡಿ ಆತಂಕ ಬರಲಿ ಕನಸುಗಳ ಬೆನ್ನೇರುವುದ ಬಿಡದಿರಿ.
-      ಸೌಹಾರ್ದತೆ ಕಲಿಯಿರಿ. ಶಾಂತಿಯಲ್ಲಿ ನೆಲೆಸಿರಿ.
-      ಚೆನ್ನಾಗಿ ಕೆಲಸ ಮಾಡಿ. ಚೆನ್ನಾಗಿ ಆಟವಾಡಿ. ಸಾಕಷ್ಟು ಬೆವರು ಹರಿಸಿ.
-      ಎಲ್ಲ ಮಕ್ಕಳೂ ವಿಶೇಷ. ಶಿಕ್ಷಕರು ಇಲ್ಲಿ ತಾರತಮ್ಯ ಕಾಣಬಾರದು.

ದೇಶಕ್ಕೆ ದೇಶವೇ ಅಂದು ಕುತೂಹಲದ ಕಣ್ತೆರೆದಿತ್ತು. ಅದಕ್ಕೆ ನಮ್ಮ ಜಿಲ್ಲೆಯೂ ಹೊರತಲ್ಲ. ಅಂದು ಮಕ್ಕಳು ಸಂವಾದದ ನೇರ ಪ್ರಸಾರ ವೀಕ್ಷಿಸಿದರು. ಸುತ್ತೂರಿನಲ್ಲಿ ಸದ್ದಿಲ್ಲದೇ ಸಂವಾದಕ್ಕೆ ಮಕ್ಕಳು ಕಿವಿಯಾದರು. ಆ ದೃಶ್ಯವೇ ಅಮೋಘ.




- Prashanth M C
Lecturer, Diet, Mysore

Saturday, 30 August 2014

ಬೀಳ್ಕೊಡುಗೆ

ವರ್ಗಾವಣೆ. ಈ ಪದವೇ ಹಲವರಿಗೆ ಅಪಥ್ಯ. ಕೆಲವರಿಗೆ ಸಹ್ಯ. ಒಳಿತಾದರೆ ಇದು ಸಹಜ. ಇಲ್ಲವಾದರೆ ಅದುವೇ ಸಜ !?.  ಈ ವಿಚಾರದಲ್ಲಿ "ಯದ್ಭಾವಂ ತದ್ಭವತಿ.." ಎಂದರೆ ಸರಿ ಹೋದೀತು....ಯಾವೊಂದು ಸಂಸ್ಥೆಯೂ ಹೊರತಲ್ಲ. ಅಂತೆಯೇ ಈ ವರ್ಷ ನಮ್ಮ ಸಂಸ್ಥೆಯ ಮೂವರು ವರ್ಗಾವಣೆಗೊಂಡರು.


ವರ್ಗಾವಣೆಗೊಂಡ ಮೂವರು ಹಿರಿಯರೇ. ಮೂವರು ಅನುಭವಿಗಳೇ. ಮೂವರು ದಕ್ಷರೇ. ಮೂವರು ಮೂರುತಿಗಳು ಹಲವು ಕೀರುತಿಗಳಿಗೆ ಭಾಜನರಾಗಿದ್ದವರು. ಅವರೆಂದರೆ :
1. ರುಕ್ಸಾನ ನಾಝನೀನ್, ಹಿರಿಯ ಉಪನ್ಯಾಸಕರು
2. ನಾಗರಾಜಯ್ಯ, ಹಿರಿಯ ಉಪನ್ಯಾಸಕರು
3. ಗಾಯಿತ್ರಿ.ಟಿ.ಎನ್. ಹಿರಿಯ ಉಪನ್ಯಾಸಕರು- ಇವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

 


ಈ ಸಂಸ್ಥೆಯಲ್ಲಿ ಕಂಡ ಕನಸು. ಆದ ನನಸು. ಅದರ ಸೊಗಸು. ಸವಿ ನೆನಪು. ಅದರ ಹೊಳಪು. ಎಲ್ಲವನ್ನೂ ಬೀಳ್ಕೊಡುಗೆ ಸ್ವೀಕರಿಸಿದ ಎಲ್ಲರೂ ಸ್ಮರಿಸಿದರು. ಕಣ್ಣಾಲಿಗಳು ಕಾವೇರಿ ಕರೆದವು. ವಿಸ್ಮೃತಿಗೆ ಅವಕಾಶ ಕೊಡದೆ ಸ್ಮೃತಿಪಟಲದಲ್ಲಿ ಈ ಕ್ಷಣ ಉಳಿಯಿತು.

 
 
 
 ಹಾಗೆಯೇ ಇವರ ಸ್ಥಾನವನ್ನು ಚಾಮರಾಜನಗರ ಡಯಟ್ ನಿಂದ ಉಪಪ್ರಾಂಶುಪಾಲರ ಸ್ಥಾನಕ್ಕೆ ಆಗಮಿಸಿದ ನಾರಯಣಗೌಡರವರು, ಹಾಸನ ಡಯಟ್ ನಿಂದ ಆಗಮಿಸಿದ ಹಿರಿಯ ಉಪನ್ಯಾಸಕಿ ಇಂದ್ರಮ್ಮ ರವರು ಮತ್ತು ಕೊಡಗು ಡಯಟ್ ನಿಂದ ಬಂದ ಹಿರಿಯ ಉಪನ್ಯಾಸಕರಾದ ಸಿದ್ದರಾಜುರವರು ಸಮರ್ಥವಾಗಿ ತುಂಬಬಲ್ಲುರು ಎಂಬುದು ಸಂಸ್ಥೆಯ ಆಶಯ.

Friday, 22 August 2014

INSPIRE AWARD2013-14 WINNERS



ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನ ದೀವಿಗೆಯ 
ಉಜ್ವಲದಿ ಬೆಳಗಲು 
ಎಳೆಯರಲಿ ತುಂಬುತಿದೆ 
ಹೊಸತನು ಹುಟ್ಟು ಹಾಕುವ ಶಕ್ತಿಯನು

ಈ ಆಶಯವನು ಸಾಕಾರಗೊಳಿಸಲು 

ನೂರಾರು ಶಾಲೆಗಳಿಂದ
ಮೈಸೂರಿಗೆ ಬಂದಿಳಿದರು
ಮರಿ ವಿಜ್ಞಾನಿಗಳು

ಪ್ರದರ್ಶಿಸಿದರು
ಬಗೆ ಬಗೆಯ ವಿಜ್ಞಾನದ ಮಾದರಿಗಳನು

ಬೆಳೆವ ಭಾರತದ
ಜನ ಹಿತಕೆ ಬೇಕಿವುಗಳು




ಇಲ್ಲಿ ಗೆದ್ದವರಿವರು ಅಲ್ಲಿಯೂ ಗೆಲ್ಲಲಿ 
ದೇಶದೇಳಿಗೆಗೆ ನೀಡಲಿ ಹೊಸತನು.



ರಚನೆ- ಮಂಜುಳ 
           ಹಿರಿಯ ಉಪನ್ಯಾಸಕಿ  


Wednesday, 6 August 2014

ಸೆಳೆದ ನೀಲು

ನಲಿದ ನೀಲು
ನಡುವೆ ಕಡು ಕೆಂಪು,
ಸುತ್ತಲೂ ನೀಲಿ ಹೂಗಳ  ಚಿತ್ತಾರ,
ಸೆಳೆಯಿತೆಲ್ಲರನು ಇಂದು,
ಸೆರೆಯಾಯಿತು ಹಲವರ ಜಂಗಮವಾಣಿಯಲ್ಲಿ, 
ಈ ಸಹಜ ಚೆಲುವಿಗೆ ಸಾಟಿಯಾರು?
 
                                                                                             ರಚನೆ : ಮಂಜುಳ,
                                                                                           ಹಿರಿಯ ಉಪನ್ಯಾಸಕರು,
                                                                                            ಡಯಟ್ , ಮೈಸೂರು

Monday, 4 August 2014

ಮಣಿಪುರದ ಶಿಕ್ಷಣತಜ್ಞರ ಜೊತೆ ಶೈಕ್ಷಣಿಕ ವಿಚಾರ ವಿನಿಮಯ

ದಿನಾಂಕ:04-08-2014ರಂದು ನಮ್ಮ ಡಯಟ್ ಗೆ ಮಣಿಪುರ ರಾಜ್ಯದ ವಿವಿಧ ಡಯಟ್ ಗಳಿಂದ ಮತ್ತು ಎಸ್.ಸಿ.ಇ.ಆರ್.ಟಿಯಿಂದ ಹಿರಿಯ ಉಪನ್ಯಾಸಕರು ಆಗಮಿಸಿದ್ದರು.

ತಂಡದಲ್ಲಿ :
ಶ್ರೀ ಎಲ್.ಗಂಭೀರ್ ಸಿಂಗ್, ಹಿರಿಯ ಉಪನ್ಯಾಸಕರು, ಡಯಟ್,ಇಂಫಾಲ್
ಶ್ರೀ ಎಚ್.ದೇಬನ್ ಸಿಂಗ್, ಹಿರಿಯ ಉಪನ್ಯಾಸಕರು, ಡಯಟ್,ಉಖ್ರುಲ್,ಮಣಿಪುರ
ಶ್ರೀಮತಿ ಡಾ.ವೈ ನಂದಿನಿದೇವಿ.ಓಎಸ್.ಡಿ., ಎಸ್.ಇ.ಆರ್.ಟಿ, ಮಣಿಪುರ
ಶ್ರೀಮತಿ ಎನ್.ಸಂತದೇವಿ, ಹಿರಿಯ ಉಪನ್ಯಾಸಕರು, ಡಯಟ್,ಸೇನಾಪತಿ, ಮಣಿಪುರ ಇವರು ಆಗಮಿಸಿದ್ದರು.


ಸಂಸ್ಥೆಯಲ್ಲಿ ಸಮಾಲೋಚನಾ ಸಭೆ ನಡೆಯಿತು. ನಮ್ಮ ಹಾಗು ಅವರ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಪರಸ್ಪರ ಚರ್ಚೆ ನಡೆಸಲಾಯಿತು.



ಚರ್ಚೆಯಲ್ಲಿ ನಿರತರಾಗಿರುವುದು
 ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಬಿ.ಕೆ.ಬಸವರಾಜು ರವರ ನೇತೃತ್ವದಲ್ಲಿ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಡಯಟ್ ನ ಉಪನ್ಯಾಸಕ ವೃಂದ




ಶಿಕ್ಷಣದಲ್ಲಿ ಸಂಗೀತ-ಲಲಿತ ಕಲೆಗಳ ಬಗ್ಗೆ ಚರ್ಚೆ ನಡೆಸಿದ ಅವರು ತಮ್ಮ ರಾಜ್ಯದ ಶುಶ್ರಾವ್ಯ ಗಾಯನವನ್ನೂ ಪ್ರಸ್ತುತ ಪಡಿಸಿದರು. ಬಳಿಕ ಡಯಟ್ ನ ವಿವಿಧ ವಿಭಾಗಗಳಿಗೆ ತೆರಳಿದ ಮಣಿಪುರದ ಶಿಕ್ಷಣ ತಜ್ಞರು ಡಯಟ್ ನ ಪ್ರಕಾಶನಗಳು, ಇಲ್ಲಿ ನಡೆದಿರುವ ಸಂಶೋಧನೆಗಳ ಮಾಹಿತಿ ಪಡೆದರು.



ಬಳಿಕ ಎಲ್ಲರೊಡಗೂಡಿ ಕ್ಲೋಸಪ್ ಚಿತ್ರ ಸೆರೆಹಿಡಿದ ಅವರಿಗೆ ಡಯಟ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು




NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...