My Blog List

Wednesday, 6 June 2018

ಪರಿ ಪರಿ ಪರಿಸರ ಸ್ವರ - ಉಳಿಸಲು ಬೇಕಿದೆ ಆತುರ ಕಾತುರ

ಜೂನ್-5. ವಿಶ್ವಪರಿಸರ ದಿನ. ಜಗತ್ತಿನೆಲ್ಲಡೆ ಪರಿಸರದ ಜಪ ತಪ .  ಈ ದಿನ ಇಂದಿಗಷ್ಟೇ ಸೀಮಿತವಾ ? ಹೌದೇನೋ ಎನ್ನಿಸಿಬಿಡುತ್ತೆ. ಏಕೆಂದರೆ, ಆಚರಣೆ, ಜಾಥಾ, ಘೋಷಣೆ, ಜಾಹೀರಾತುಗಳಲ್ಲಷ್ಟೇ ನಾವು ಆಚರಣೆಗಳನ್ನು ಸೀಮಿತಗೊಳಿಸಿದ್ದೇವೆ. ನಿತ್ಯ  ಒಂದಿಲ್ಲೊಂದು ಆಚರಣೆಗಳು ನಮ್ಮನ್ನು ಮುಟ್ಟುತ್ತಿವೆ. ಈ ಕಾರಣದಿಂದಲೇ ಏನೋ ನಾವು ಇಂದು ಘೊಷಣೆಗಳಿಗೆ ಸೀಮಿತಗೊಳಿಸಿದ್ದೇವೆ. 
ಮೈಸೂರು ಉತ್ತರ ವಲಯದಲ್ಲಿ ಪರಿಸರ ದಿನ

ಆದರೆ ಪರಿಸರ ದಿನ ಎಲ್ಲ ದಿನಗಳಂತಲ್ಲ. ಪ್ರತಿ ದಿನವೂ ಪರಿಸರ ದಿನವೇ. ಪ್ರತಿ ಕ್ಷಣವು ಪರಿಸರ ಕ್ಷಣವೇ. ಪರಿಸರ ಎಂಬ ಉಸಿರಿಲ್ಲದೇ ಯಾವುದೇ ಬಸಿರಿಲ್ಲ. ಯಾವುದೇ ಹೆಸರಿಲ್ಲ. ಅಷ್ಟು ಪಸರಿಸಿದೆ ನಮ್ಮೀ ಪರಿಸರ. 
ಪಿರಿಯಾಪಟ್ಟಣದ ರಾವಂದೂರಿನಲ್ಲಿ ಪರಿಸರ ದಿನ

ನಾವು ಇಂದು ನೆಮ್ಮದಿಯಿಂದ  ಇದ್ದೇವೆ. ನಮ್ಮೆಲ್ಲಾ ಆಸೆ ಆಕಾಂಕ್ಷೆ ಈಡೇರಿಸಿಕೊಳ್ಳುತ್ತಿದ್ದೇವೆ. ಇದೆಲ್ಲವೂ ಪರಿಸರದಿಂದ ಸಾಧ್ಯವಾಗುತ್ತಿದೆ. ನಮ್ಮೆಲ್ಲಾ ಬೇಕುಗಳಿಗೆ, ಬೇಡಗಳಿಗೆ ಪರಿಸರ ತನ್ನ ಒಡಲನ್ನೇ ಧಾರೆಯೆರೆದಿದೆ. 
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ಪರಿಸರ ದಿನ

ಆದರೆ, ಈ ಪರಿಸರ ಕೇವಲ ನಮ್ಮ ಸ್ವತ್ತಾ ? ಪರಿಸರ  ಇರುವುದೇ ಇಂದಿನ ನಮಗಳಿಗಾಗಿ ಮಾತ್ರನಾ ? 
ಮೈಸೂರು ಉತ್ತರ ವಲಯದಲ್ಲಿ 

ಈ ಸಂದೇಹ  ಏಕೆಂದರೆ, ಇಂದಿನ ನಿತ್ಯ ಸನ್ನಿವೇಶಗಳನ್ನ ನೋಡಿದರೆ, ಮಾಲಿನ್ಯದ ಪ್ರಮಾಣವನ್ನ, ಪ್ರಮಾದವನ್ನ ನೋಡಿದರೆ, ಪರಿಸರದ ಮಾರಣ ಹೋಮ ನೋಡಿದರೆ, ಪರಿಸರದ ಬಗ್ಗೆ ಅಸಡ್ಡೆಯನ್ನ ನೋಡಿದರೆ, ಪರಿಸರದ ಬಗ್ಗೆ ಉದಾಸೀನತೆ, ಅಲಕ್ಷ್ಯ, ನಿಶ್ಕಾಳಜಿ, ನಿಷ್ಕರುಣೆ, ಅಂಧತ್ವ ನೋಡಿದರೆ ಹಾಗೆನ್ನಿಸುತ್ತದೆ. 
ಹೆಚ್.ಡಿ.ಕೋಟೆ ತಾಲೂಕಿನ ಮಗ್ಗೆಯಲ್ಲಿ ಪರಿಸರ ದಿನ

ಕೇವಲ   ಇಂದಿಗಷ್ಟೇ ಸೀಮಿತವಾಗಿರುವ ನಮ್ಮ ಆಲೋಚನೆಗಳು, ಆಕಾಂಕ್ಷೆಗಳು, ಆಸೆಗಳು ನಾಳೆಯನ್ನು ಸಂಪೂರ್ಣ ನಿರ್ಲಕ್ಷಿಸಿವೆ. ನಾಳೆಗಳ ಬಗ್ಗೆ ಕಿಂಚಿತ್ತೂ ಆಲೋಚಿಸದೇ ಮುನ್ನಡೆಯುತ್ತಿದ್ದೇವೆ. ಹೀಗಾದರೆ, ನಮ್ಮ ಮುಂದಿನ ಪ್ರಜೆಗಳು/ಮಕ್ಕಳು ಬದುಕುವುದು ಹೇಗೆ ? ಅವರಿಗೆ ನೆಮ್ಮದಿಯ ನಾಳೆಗಳು ಸಿಗುವುದು ಹೇಗೆ ? ಭವಿಷ್ಯದ ಬೆಳಕು ಮೂಡುವುದು ಹೇಗೆ ? ನಮ್ಮೆಲ್ಲರ ದುಡಿಮೆಯೆ ನಮ್ಮ ಮಕ್ಕಳಿಗೆ. ನಮ್ಮೆಲ್ಲರ ಆಸೆ-ಆಕಾಂಕ್ಷೆಗಳೇ ನಮ್ಮ ಮುಂದಿನ ಮಕ್ಕಳು. ಹೀಗಿರುವಾಗ ಅವರಿಗಾಗಿಯೇ ಹಗಲಿರುಳು ದುಡಿಯುತ್ತಿರುವ ನಾವೆಲ್ಲರೂ ಕೇವಲ ಅರ್ಥವನ್ನಷ್ಟೇ ಗಳಿಸಿ ಗಳಿಸಿ, ಉಳಿಸಿ, ಶೇಖರಿಸಿಟ್ಟು ಹೋದರೆ...ನಾವು ನಮ್ಮ ಮಕ್ಕಳಿಗೆ ನೀಡುವ ಸಂದೇಶವಾದರೂ ಏನು ? ಹೌದಲ್ಲವೇ ?
ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಶಾಲೆಯಲ್ಲಿ ಪರಿಸರ ದಿನ

ಹೀಗಾಗಿ ನಮ್ಮೆಲ್ಲರ ಭವಿಷ್ಯದ ಬೆಳಕಿಗೆ ಮುನ್ನುಡಿಯಾಗಿರುವ ನಮ್ಮ ಶಾಲೆಗಳಲ್ಲಿ ಈ ಬಗ್ಗೆ ಕಾಳಜಿ, ಆಸ್ಥೆ ವಹಿಸಿ ಸಹಸ್ರಾರು ಗಿಡಗಳನ್ನು ನೆಡುವ ಕೈಂಕರ್ಯ ಕೈಗೊಳ್ಳಲಾಗಿದೆ. ರಾಜ್ಯವಷ್ಟೇ ಅಲ್ಲದೇ, ದೇಶವಷ್ಟೇ ಅಲ್ಲದೇ, ವಿಶ್ವದೆಲ್ಲೆಡೆ ಈ ದಿನ ಪರಿಸರ ಉಳಿಸುವ ನಿಟ್ಟಿನಲ್ಲಿ ನಮ್ಮ ಮಕ್ಕಳು ಸಸಿ ನೆಡುವ ಮೂಲಕ ವಿಶ್ವಪರಿಸರದ ಉಳಿವಿಗೆ ನಾಂದಿ ಹಾಡಿದ್ದಾರೆ. 
ಕೆ.ಆರ್.ನಗರ ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಪರಿಸರ ದಿನ

ಎಲ್ಲಾ ಶಾಲೆಗಳಲ್ಲೂ ಗಿಡ ನೆಡುವ ಮೂಲಕ ವಿಶ್ವಪರಿಸರ ದಿನ ಆಚರಿಸಲಾಗಿದೆ. ಆದರೆ, ಗಿಡ ನೆಟ್ಟ ಮಾತ್ರಕ್ಕೆ ಪರಿಸರ ಉಳಿದಂತಲ್ಲ. ಸಸಿ, ಗಿಡ ನೆಟ್ಟಷ್ಟೇ ಕಾಳಜಿ ಅವುಗಳನ್ನು ರಕ್ಷಿಸುವಲ್ಲಿಯೂ ತೋರಬೇಕಿದೆ. 


  • ನೆಟ್ಟ ಪ್ರತಿ ಸಸಿಗೂ ಒಬ್ಬ ವಿದ್ಯಾರ್ಥಿಯನ್ನೋ, ಶಿಕ್ಷಕರನ್ನೋ, ತರಗತಿಯನ್ನೋ ರಕ್ಷಕರನ್ನಾಗಿ ನೇಮಿಸಬೇಕು. 
  • ಪ್ರತಿ ನಿತ್ಯ ನೀರು ಹಾಕುವ ಕಾಯಕವನ್ನು ವೇಳಾಪಟ್ಟಿಯಂತೆ ನಿಗದಿಗೊಳಿಸಬೇಕು. 
  • ಪ್ರತಿ ಗಿಡ ಸ್ವಲ್ಪ ಪ್ರಮಾಣದ ಬೆಳವಣಿಗೆ ಕಾಯುವ ತನಕ ಅದಕ್ಕೆ ರಕ್ಷಣೆ ಅತ್ಯಗತ್ಯ.  ಇಲ್ಲವಾದಲ್ಲಿ ಕಿಡಿಗೇಡಿಗಳ ಮೂರ್ಖತನಕ್ಕೆ ಅವು ಬಲಿಯಾಗಬೇಕಾದೀತು. ಆದ ಕಾರಣ ಮುಳ್ಳಿನ/ರಕ್ಷಣೆಯ ಬೇಲಿಯನ್ನು ನಿರ್ಮಿಸಿ. 
  • ಪ್ರಸಕ್ತ ವರ್ಷ ಶಾಲೆಯಿಂದ ಹೊರಗಡಿಯಿಡುವ ಹಿರಿಯರಿಗೆ, ನೆಟ್ಟ ಗಿಡಗಳನ್ನು ಉಳಿಸುವ ಜವಾಬ್ದಾರಿ ವಹಿಸಿದರೆ ಅದು ಕಿರಿಯರಿಗೆ ಮಾರ್ಗದರ್ಶನವಾಗಬಹುದೇನೋ.!
  • ಗಿಡಗಳು ಅಕ್ಷರ ದಾಸೋಹಕ್ಕೆ ನೆರವಾಗುವಂತಿರಲಿ. ಹಣ್ಣು, ತರಕಾರಿ, ಔಷಧಿ, ಫಲ ನೀಡುವಂತಿರಲಿ. 
  • ಶಾಲೆಗೆ ವಿಶೇಷವಾಗಿ ಆಗಮಿಸುವ ಅತಿಥಿಗಳಿಂದಲೂ ಒಂದೊಂದು ಗಿಡ ನೆಡಿಸಿ, ಅವರ ನೆನಪಿನಲ್ಲಿ ಉಳಿಯುವಂತೆಯೂ, ಸಸಿಗಳಿಗೆ ಜೀವ ತುಂಬಿರಿ. 
  • ಪರಿಸರದ ಉಳಿವಿನ ಅಗತ್ಯತೆಯನ್ನು ಮಕ್ಕಳಿಗೆ ಸಾರಿ ಸಾರಿ ಮನಮುಟ್ಟುವಂತೆ ಹೇಳಿರಿ. 
  • ವಿಶ್ವಸಂಸ್ಥೆಯ  ಈ ವರ್ಷದ ಘೋಷಣೆ " ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿರಿ" ಕುರಿತು ಮಕ್ಕಳಿಗೆ ಹೆಚ್ಚು ವಿಷಯಜ್ಞಾನ ತುಂಬಿರಿ (ನಾಗೇಶ್ ಹೆಗಡೆಯವರ 'ಪ್ಲಾಸ್ಟಿಕ್ ಎಂಬ ಕಸ-ರಕ್ಕಸ' ಪುಸ್ತಕ ಪರಿಚಯಿಸಿ". 


ನಾವೆಲ್ಲಾ ಮನುಷ್ಯರು.ಅಕ್ಷರಶಃ ಮನುಷ್ಯರಾಗಬೇಕು. ರಾಕ್ಷಸರಾಗಬಾರದು. ಪರಿಸರ ನಮ್ಮ ಉಸಿರಾಗಬೇಕು. ಪರಿಸರ ನಮ್ಮ ಹೆಜ್ಜೆ ಹೆಜ್ಜೆಯ ದನಿಯಾಗಬೇಕು. ಬದುಕೋಣ. ಬದುಕಲು ಬಿಡೋಣ.  


No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...