ಟಿಕ್ ಟಿಕ್ ಟಿಕ್ . ಪ್ಲಾಸ್ಟಿಕ್. ಮನುಕುಲದ ಮಹಾಶತ್ರು. ಮನುಜ ಪಥದ ಮಹಾಕಂಟಕ. ಅಂಗಿ ಜೇಬಿನಲ್ಲಿರೋ ಮೊಬೈಲ್, ಪ್ಯಾಂಟ್ ಜೇಬಿನಲ್ಲಿರೋ ಪರ್ಸ್, ಸೊಂಟದಲ್ಲಿರೋ ಬೆಲ್ಟ್, ಕಾಲಿನಲ್ಲಿರೋ ಶೂ-ಚಪ್ಪಲಿ, ಕೈಗೆ ಹಾಕೊಂಡಿರೋ ಬ್ಯಾಂಡ್, ಕೊರಳಲ್ಲಿರೋ ಮಣಿಸರ, ತಲೆ ಮೇಲಿರೋ ಹೇರ್ ಬ್ಯಾಂಡ್, ಮನೆ ಮನೆಯ ಮೂಲೆ ಮೂಲೆಯಲ್ಲಿರೋ 90% ವಸ್ತುಗಳೆಲ್ಲವೂ ಪ್ಲಾಸ್ಟಿಕ್ ಮಯ. ಅಷ್ಟೇ ಏಕೆ ‘ನಿಮ್ಮ ಉಸಿರಿನಲ್ಲಿ, ಉದರದಲ್ಲಿ’ ಪ್ಲಾಸ್ಟಿಕ್ ಇದೆ..!!! ಹೌದೋ ಅಲ್ಲವೋ…? ನೀವೇ ಒಮ್ಮೆ ನಿಮ್ಮ ನಿಮ್ಮ ಮನೆಯನ್ನ ಪರೀಕ್ಷಿಸಿಕೊಳ್ಳಿ. ಖಂಡಿತಾ...ಒಪ್ಪಿಕೊಳ್ಳುತ್ತೀರಿ. ಖಂಡಿತ ಬೆಕ್ಕಸ ಬೆರಗಾಗುತ್ತೀರಿ.
ಹೀಗೆ ಬೆರಗಾದರೆ, ಬೆಚ್ಚಿ ಬಿದ್ದರೆ, ಅಚ್ಚರಿ ಪಟ್ಟರೆ, ದಿಗ್ಬ್ರಮೆಗೊಂಡರೆ, ಅಸಹನೆ ಪಟ್ಟರೆ ಆಯಿತೇ ? ಮುಗಿಯಿತೇ ? ಇದಕ್ಕೊಂದು ಪರಿಹಾರ ಇಲ್ಲವೇ ? ಇದಕ್ಕೆ ಪರ್ಯಾಯವಿಲ್ಲವೇ ? ಇಷ್ಟು ವರ್ಷ ನಮ್ಮ ಹಿರಿಯರು ಪ್ಲಾಸ್ಟಿಕ್ ಇಲ್ಲದೇ ಬದುಕಿರಲಿಲ್ಲವೇ ? ಪ್ಲಾಸ್ಟಿಕ್ ಎಂಬ ಮಾಯಾ ರಕ್ಕಸನನ್ನು ಮಟ್ಟ ಹಾಕಲು ಪರ್ಯಾಯ ದಾರಿ ಎಂಬುದೇ ಇಲ್ಲವೇ ? ಎಂದು ನಮಗೆ ನಾವೇ ಪ್ರಶ್ನಿಸಿಕೊಂಡರೆ.. ಹತ್ತಿರದಲ್ಲೇ ಒಂದು ಆಶಾಕಿರಣ ಮೂಡದಿರದು. ಸನಿಹದಲ್ಲೇ ಒಂದು ಸ್ನೇಹಸೇತು ಸಿಗದೆ ಇರದು. ಅಂತಹ ಸ್ನೇಹಸೇತುವೊಂದು “ವಿಶ್ವಪರಿಸರದ ದಿನ” ಸಿಕ್ಕಿದೆ. ಅದುವೇ ನಾಗೇಶ್ ಹೆಗಡೆ ಅವರೇ ನಿರೂಪಣೆ ಮಾಡಿರುವ “ಪ್ಲಾಸ್ಟಿಕ್ ಎಂಬ ಕಸ ರಕ್ಕಸ” ಪುಸ್ತಕ.
ಪ್ಲಾಸ್ಟಿಕ್ ಎಂಬ ಕಸ ಹೇಗೆ ರಕ್ಕಸನಾಗಿ ಬೆಳೆದು ನಿಂತಿದೆ ? ಹೇಗೆ ತನ್ನ ಕಬಂಧ ಬಾಹು ಚಾಚುತ್ತಿದೆ ? ತನ್ನ ಸೃಷ್ಟಿಕರ್ತ ಮನುಷ್ಯನಿಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೂ ಹೇಗೆ ಕಂಟಕವಾಗಿದೆ ಎಂಬುದನ್ನು ನಾಗೇಶ್ ಹೆಗಡೆ ಸರ್ ಈ ಪುಸ್ತಕದಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾರೆ.
ಪ್ಲಾಸ್ಟಿಕ್ ಎಂದಿಗೂ ನಾಶವಾಗದ, ನೀರಿನಲ್ಲಿ-ಮಣ್ಣಿನಲ್ಲಿ-ಗಾಳಿಯಲ್ಲಿ-ಸಮುದ್ರದಲ್ಲಿ-ಹಿಮದ ಉತ್ತುಂಗದಲ್ಲಿಯೂ ಲೀನವಾಗುವ ತಾಕತ್ತಿರೋ ಕಣ್ಣೆದುರಿಗಿನ ವಿಷ. ಒಂದರ್ಥದಲ್ಲಿ ಪ್ಲಾಸ್ಟಿಕ್ ಅವಿನಾಶಿ.
- ಪ್ಲಾಸ್ಟಿಕ್ ಜೊತೆ ಏಗುವುದು ಹೇಗೆ ?
- ಪ್ಲಾಸ್ಟಿಕ್ ನ ರುದ್ರ , ರಮ್ಯ ಕತೆ.
- ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾ- ರೀ-ರೀ-ರೀ-ರೀ.
- ಯಾವ ಪ್ಲಾಸ್ಟಿಕ್ ಎಂಥ ಗುಣ ?
- ಪ್ಲಾಸ್ಟಿಕ್ ನ ಅಪಾಯಗಳು.
- ಒಂದು ಚಮಚ ವಿಶ್ವಪ್ರದಕ್ಷಿಣೆ.
- ಪ್ಲಾಸ್ಟಿಕ್ ತ್ಯಾಜ್ಯ ಒತ್ತಿಡುವ ವಿಧಾನ.
- ಟಯರ್ ಎಂನ ಚಕ್ರಾಸುರ.
ಹೀಗೆ ಎಂಟು ಕಿರು ಅಧ್ಯಾಯಗಳಲ್ಲೇ ಪ್ಲಾಸ್ಟಿಕ್ ಎಂಬ ರಕ್ಕಸನಿಗೂ ನಮಗೂ ಅಂಟಿದ ನಂಟಿನ ನವಿರಾದ ನಿರೂಪಣೆಯನ್ನು ಬಿಚ್ಚಿಡುತ್ತಾರೆ.
ಪ್ಲಾಸ್ಟಿಕ್ ಜೊತೆ ಏಗುವುದು ಹೇಗೆ ? ಎಂಬ ಅಧ್ಯಾಯದಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಎಚ್ಚರ, ನಿಯಂತ್ರಣ, ಶಿಸ್ತಿನ ವಿಲೇವಾರಿಯಿಂದ ಮಾತ್ರ ಸಾಧ್ಯ ಎನ್ನುತ್ತಾರೆ.
- ಸಾಧ್ಯವಿರುವ ಕಡೆ ಪ್ಲಾಸ್ಟಿಕ್ ನಿರಾಕರಿಸಿ.
- ಅಂಗಡಿಗೆ ತೆರಳುವಾಗ ಕೈ ಚೀಲಗಳನ್ನು ಒಯ್ಯಿರಿ.
- ಹೊಟೆಲ್ ಪಾರ್ಸಲ್ ಗೆ ಪಾತ್ರೆ ಒಯ್ಯಿರಿ.
- ಅಂಗಡಿಯಿಂದ ತಂದ ಕ್ಯಾರಿ ಬ್ಯಾಗ್ ಮತ್ತೆ ಪುನರ್ ಬಳಸಿರಿ.
ಪ್ಲಾಸ್ಟಿಕ್ ಎಂಬುದು ಘನರೂಪದ ಪೆಟ್ರೋಲ್. ಇದನ್ನುಯಾವುದೇ ಕಾರಣಕ್ಕೂ ಸುಡಬೇಡಿ. ಸಂಗ್ರಹಿಸಿ ಪ್ಲಾಸ್ಟಿಕ್ ಪುನರ್ ಬಳಕೆ ಮಾಡುವವರಿಗೆ, ಚಿಂದಿ ಆಯುವವರಿಗೆ ನೀಡಿ ಎಂದು ನಾಗೇಶ್ ಸರ್ ಸಲಹೆ ನೀಡುತ್ತಾರೆ.
ಪ್ಲಾಸ್ಟಿಕ್ ನ ರುದ್ರ , ರಮ್ಯ ಕತೆಯೇ ರೋಚಕವಾಗಿದೆ. ಪುಣೆಯ ಡಾ.ಮೇಧಾ ಮತ್ತು ಶಿರೀಷ್ ಎಂಬ ದಂಪತಿಗಳಿಬ್ಬರು ಪ್ಲಾಸ್ಟಿಕ್ ರಾಶಿ ರಾಶಿ ನೋಡಿ ನೋಡಿ ಹೈರಾಣಾಗಿ ಕಡೆಗೆ ಪ್ಲಾಸ್ಟಿಕ್ ಪುನರ್ ಬಳಕೆಗೆ ಕುಕ್ಕರ್ ನಲ್ಲಿ ಪ್ಲಾಸ್ಟಿಕ್ ಕುದಿಸಿ ಕುದಿಸಿ, ಆ ಮೂಲಕ ಪ್ಲಾಸ್ಟಿಕ್ ಘನೀಕರಿಸಿ ರಸ್ತೆ ನಿರ್ಮಿಸಲು ಪರ್ಯಾಯ ಮಾರ್ಗ ಕಂಡು ಕೊಂಡ ಸತ್ಯಕಥೆ ಇದೆ. ಇದನ್ನು ನೀವು ಓದಿಯೇ ಅನುಭವಿಸಬೇಕು.
ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾ- ರೀ-ರೀ-ರೀ-ರೀ. ಅಂದರೆ ಬೇರೇನು ಅಲ್ಲ. ಇದು ನಾಗೇಶ್ ಸರ್ ರವರ ನಾವಿನ್ಯಯುತ ಆಲೋಚನೆ. ಅದು ಹೀಗಿದೆ ನೋಡಿ.
1-ರೀ = ರಿಫ್ಯೂಸ್ - ನಿರಾಕರಿಸು - ಅತ್ಯುತ್ತಮ ವಿಧಾನ. ಪ್ರಯತ್ನಿಸಬಹುದು.
2-ರೀ = ರಿಡ್ಯೂಸ್ - ಕಡಿಮೆ ಬಳಸು - ಅನಿವಾರ್ಯವಾದಾಗ ಮಾತ್ರ ಬಳಸುವುದು.
3-ರೀ = ರೀಯೂಸ್ - ಬಳಸಿದ್ದನ್ನೇ ಬಳಸುವುದು - ಬೇರೆ ಬೇರೆ ರೂಪದಲ್ಲಿ ಬಳಸುವುದು.
4-ರೀ = ರೀ ಸೈಕಲ್ - ಪರಿವರ್ತನೆಗೆ ಕೊಡು - ಸಂಗ್ರಹಿಸಿ ರದ್ದಿಯವರಿಗೆ ನೀಡುವುದು.
ವಿಷವೆಂದ ಮೇಲೆ ಎಲ್ಲವೂ ಒಂದೇ. ಅದರ ಪರಮಗುರಿ ಸಾವಿನ ಮನೆ ಕದ ತೆರೆಯುವುದೇ ಆಗಿದೆ. ಆದರೆ, ಈ ಸಾವಿನ ಮನೆಯ ಸಾರಥಿಗಳೂ ಬಣ್ಣದಲ್ಲಿ ಗುಣದಲ್ಲಿ ಹಲವರಿದ್ದಾರೆ. ಅವರನ್ನೇ ಈ “ಯಾವ ಪ್ಲಾಸ್ಟಿಕ್ ಎಂಥ ಗುಣ ?” ಎಂಬ ಅಧ್ಯಾಯದಲ್ಲಿ ನಾಗೇಶ್ ಸರ್ ವಿವರಿಸಿದ್ದಾರೆ.
PET - ತಂಪುಪೇಯ, ನೀರಿನಬಾಟಲಿ, ಔಷಧಿ ಬಾಟಲಿ, - ಜಾಸ್ತಿ ದಿನ ಬಳಸಕೂಡದು.
HDPE- ಹಾಲಿನ ಪ್ಯಾಕೆಟ್, ಜ್ಯೂಸ್ ಬಾಟಲ್, ಶಾಂಪೂ ಬಾಟಲ್ , ಮಕ್ಕಳ ಆಟಿಕೆ ಇತ್ಯಾದಿ. ಇವನ್ನು ಮತ್ತೆ ಮತ್ತೆ ಬಳಸಬಹುದು.
PVC - ಅತ್ಯಂತ ಅಪಾಯಕಾರಿ. ಬಳಸಲೇ ಬಾರದು. ಸುಟ್ಟರೆ ಡಯಾಕ್ಸಿನ್ ಎಂಬ ವಿಷಾನಿಲ ಹೊರಹೊಮ್ಮುತ್ತೆ.
LDPE- ನೀರಿನ ಬಾಟಲಿ, ಕ್ಯಾರಿ ಬ್ಯಾಗ್ - ಅತ್ಯಂತ ಪಾರದರ್ಶಕವಾದದ್ದು. ಶತಮಾನ ಕಳೆದರೂ ಕರಗುವುದಿಲ್ಲ.
PP - ಐಸ್ಕ್ರೀಂ ಕಪ್, ಸ್ಟ್ರಾ, ಲೋಟ, ಪ್ಲೇಟ್, ಡಯಪರ್, ಇವನ್ನು ಜಾಸ್ತಿದಿನ ಬಳಸಬಾರದು. ಬಿಸಿ ವಸ್ತು ತುಂಬ ಬಾರದು.
PS - ಫ್ರಿಜ್ ಟ್ರೇ, ಕೆಚಪ್ ಬಾಟಲ್, ಸಿಡಿ ತಟ್ಟೆ ಇತ್ಯಾದಿ. ಅತ್ಯಂತ ಅಪಾಯಕಾರಿ. ಇಟ್ಟಲ್ಲೇ ವಿಷ ಕಾರುತ್ತವೆ.
ಇತ್ಯಾದಿ - ಅರ್ಕಾಲಿಕ್, ನೈಲಾನ್, ಫೈಬರ್ ಗ್ಲಾಸ್, ಸನ್ ಗ್ಲಾಸ್, ಪಾಲಿ ಕಾರ್ಬೋನೆಟ್ ಇತ್ಯಾದಿ. ಬಂಜೆತನಕ್ಕೆ ಕಾರಣ.
ಶಾಂತಿ ಸಾಗರದಲ್ಲಿನ ಮಿಡ್ ವೇ ಎಂಬ ದ್ವೀಪವಿದೆ. ಇಲ್ಲಿ ಪಕ್ಷಿಯೊಂದು ಪ್ಲಾಸ್ಟಿಕ್ ಸೇವನೆಯಿಂದ ಸತ್ತಿರುವ ದೃಶ್ಯ ನೊಡಿದರೆ ಪ್ಲಾಸ್ಟಿಕ್ ರಕ್ಕಸನ ಘನಘೋರ ದೃಶ್ಯ ನಮಗೆ ಗೊಚರಿಸುತ್ತದೆ. ಈ ಕಥೆಯೊಂದಿಗೆ ಅಪಾಯಗಳನ್ನು ಸಹ ಪ್ಲಾಸ್ಟಿಕ್ ನ ಅಪಾಯಗಳು ಎಂಬ ಅಧ್ಯಾಯದಲ್ಲಿ ಸರ್ ವಿವರಿಸ್ತಾರೆ. ಕಣ್ಣು ಮಾಲಿನ್ಯ - ವಿಷ ಗಾಳಿ - ಬೂದಿ ಮತ್ತು ಚರಟ-ಡಯಾಕ್ಸಿನ್ ಎಂಬ ಸರಣಿಯಲ್ಲಿ ಹಲವು ದೋಷಗಳನ್ನು ಮನುಷ್ಯ ತನಗೆ ತಾನೇ ತಂದು ಕೊಳ್ಳುತ್ತಿದ್ದಾನೆ ಎಂಬ ವಿಷಾದವಿದೆ.
ಈ ಪುಸ್ತಕವನ್ನು ಓದಿಯೇ ತೀರಬೇಕು ನಾವು. ರೀ ರೀ ರೀ ರೀ...ಸ್ವಲ್ಪ ತಾಳಿ ಎನ್ನುವಂತಾಗಬೇಕು ನಾವು. ಪರಿಸರದೊಂದಿಗೆ ಹೆಜ್ಜೆ ಇಡುತ್ತಾ. ಪರಿಸರದ ಶಿಶುಗಳಾಗಬೇಕು ನಾವು. ನಮ್ಮ ನೆಮ್ಮದಿಯ ನಾಳೆಗೆ. ನಮ್ಮ ಮಕ್ಕಳ ನೆಮ್ಮದಿಯ ಹಾಳೆಗೆ. ಬಾಳ್ಮೆಗೆ.
-prASHAnth.M.C
Lecturer
Diet,Mysuru
No comments:
Post a Comment