ಬೆಳ್ಳಂಬೆಳಿಗ್ಗೆ ಡಯಟ್ ನಲ್ಲಿ ದೇಸಿ
ರಂಗು. ಎಲ್ಲ ನಮ್ಮವರೇ. ನಮ್ಮ ನೆರೆಹೊರೆಯ ಜನರೇ ಎಂಬ ಭಾವ. ಇದು ಜಾನಪದ ನೃತ್ಯ ಸ್ಪರ್ಧೆಯ ಝಲಕ್.
ಹೀಗಾಗಿಯೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಳ್ಳಿಸೊಗಡಿಗೆ ತಲೆದೂಗಿತ್ತು.
ಮಾನ್ಯ ಜಂಟಿ ನಿರ್ದೇಶಕರಾದ ಶ್ರೀ ಚಾಮೇಗೌಡರು, ಜಾನಪದ ವಿದ್ವಾಂಸ, ರಂಗಕರ್ಮಿ ಡಾ.ಪಿ.ಕೆ.ರಾಜಶೇಖರ್ರವರು ವಿನೂತನವಾಗಿ ಚಾಲನೆ ನೀಡಿದರು.
ಅಂದಹಾಗೆ ಲಯಬದ್ಧವಾದ ಸಂಗೀತಕ್ಕೆ ದೇಹ ಚಲಿಸುವ ಈ ನೃತ್ಯಕಲೆ ಅವಿನಾಶಿ. ಅವಿಚ್ಛಿನ್ನ. ಈ ನೆಲದ ಮುಖಗಳನ್ನು ಅನಾವರಣಗೊಳಿಸುತ್ತಲೇ, ಬದುಕಿನ ಹಲವು ಆಯಾಮಗಳಿಗೆ ವಿಸ್ತರಿಸಿಕೊಳ್ಳುತ್ತಾ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ತನ್ನ ಹರವು ಚಾಚಿಕೊಂಡಿದೆ. ಇಂತಹ ಜಾನಪದ ನೃತ್ಯಕ್ಕೆ ವಸಂತಮಹಲ್ ನಲ್ಲಿ ವೇದಿಕೆ ದೊರೆತದ್ದು ಸಾಂಸ್ಕೃತಿಕ ನಗರಿಯ ಸಂಕೇತದಂತಿರುವ ಮಹಲ್ ಗೆ ಮೆರಗು ನೀಡಿತು.
ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು,
ಹಾಸನ, ತುಮಕೂರು ಹೀಗೆ ಹಲವು ಕಡೆಯಿಂದ ಬಂದ ಮಕ್ಕಳೆಲ್ಲಾ ರಾಜ್ಯಮಟ್ಟದ ಜಾನಪದ ನೃತ್ಯದಲ್ಲಿ ತಲ್ಲೀನರಾದರು.
ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ, ಡಿ.ಎಸ್.ಇ.ಆರ್.ಟಿ ಮತ್ತು ಡಯಟ್, ಮೈಸೂರು ಇವರ ಆಶ್ರಯದಲ್ಲಿ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆ ಜರುಗಿತು.
ಸ್ಪರ್ಧೆಗಾಗಿ ಸ್ಪರ್ಧೆ ಮಾಡದೇ ಮಕ್ಕಳು
ಹಾಡಿ ಕುಣಿದರು. ನೃತ್ಯಿಸಿ ನಲಿದರು.
- Prashanth M C
Lecturer, Diet, Mysore