My Blog List

Thursday, 26 October 2017

ಅತ್ತಿಗೋಡು ಹತ್ತಿನೋಡು

ಎಲ್ಲೆಲ್ಲೂ ತಂತ್ರಜ್ಞಾನ. ಎಲ್ಲೆಡೆಯೂ ಆಧುನಿಕತೆ ಸ್ಪರ್ಶ. ಸದ್ಯಕ್ಕೀಗ ಪರ್ವಕಾಲವೇ ಸರಿ. ಈ ಕಾಲಘಟ್ಟದ ತಂತ್ರಜ್ಞಾನ ಎಂಬ ಮಾಯಾಜಿಂಕೆ ಎಲ್ಲರನ್ನೂ , ಎಲ್ಲವನ್ನೂ ಮೋಡಿ ಮಾಡುತ್ತಿದೆ. ಕಲಿಕೆಯನ್ನು ಸುಗಮಗೊಳಿಸುತ್ತಿದೆ. ಶಿಕ್ಷಕರ ಹೊರೆ ತಗ್ಗಿಸುತ್ತಿದೆ. ಮಕ್ಕಳ ಲವಲವಿಕೆ ಹೆಚ್ಚಿಸುತ್ತಿದೆ. ಸರ್ಕಾರಿ ಶಾಲೆ ಎಂಬ ಕೀಳರಿಮೆ ಕರಗಿಸುತ್ತಿದೆ. ತೆರೆ ಹಿಂದಿನ ಶಾಲೆಗಳು ತೆರೆ ಮೇಲೆ ಬರತೊಡಗಿವೆ. ಒಟ್ಟಾರೆ. ತರಗತಿಗಳನ್ನು ಶ್ರೀಮಂತಗೊಳಿಸುತ್ತಿದೆ.


ಇದಕ್ಕೆ ಇಂಬು ನೀಡುವಂತೆ ಸರ್ಕಾರ ಸಹ ಹೊಸ ಹೊಸ ಸಾಧ್ಯತೆಗಳಿಗೆ ತನ್ನನ್ನು, ತನ್ನವರನ್ನು ತೆರೆದುಕೊಳ್ಳುವಂತೆ ಮಾಡಿದೆ. ಇದರ ಪ್ರತಿಬಿಂಬವೇ ಟೆಲಿ ಎಜುಕೇಷನ್, ಸಿ.ಎ.ಎಲ್.ಸಿ, ಎಜುಸ್ಯಾಟ್, ಐಟಿ@ಸ್ಕೂಲ್/ಟ್ಯಾಲ್ಪ್ ಇತ್ಯಾದಿ.
ಹೀಗೇ ಟ್ಯಾಲ್ಪ್ ಅಥವಾ ಐಟಿ@ಸ್ಕೂಲ್ ಯೋಜನೆ ಎಲ್ಲ ಜಿಲ್ಲೆಗಳಂತೆ ನಮ್ಮಲ್ಲೂ  ಅನುಷ್ಠಾನಗೊಂಡಿದೆ.
ಒಟ್ಟು 48 ಶಾಲೆಗಳು ಈ ಯೋಜನೆಗೊಳಪಟ್ಟಿವೆ.
ಇದುವರೆವಿಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಶಿಕ್ಷಕರು ತರಬೇತಿಗೊಂಡಿದ್ದಾರೆ.
ಮುಖ್ಯಶಿಕ್ಷಕರಿಗೂ ತರಬೇತಿ ನೀಡಲಾಗಿದೆ.
ಶಾಲೆಗಳಿಗೆ ಲ್ಯಾಪ್ ಟಾಪ್, ಪ್ರೊಜೆಕ್ಟರ್, ಪೂರೈಸಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.


ಆದರೆ, ನಾನ್ ಐಸಿಟಿ ಶಾಲೆಯೊಂದು ನಮ್ಮ ಜಿಲ್ಲೆಯಲ್ಲಿ ಆಯ್ಕೆಗೊಂಡಿದೆ. ಈ ಶಾಲೆಯೇ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ. ಮೈಸೂರು ಡಯಟ್ ನ ಪ್ರಾಂಶುಪಾಲರಾದ ರಘುನಂದನ್.ಆರ್, ರವರ ನೇತೃತ್ವದಲ್ಲಿ ಡಯಟ್ ನ ಡಿಎಂಪಿಬಿಎಸ್ ವಿಭಾಗದ ಉಪನ್ಯಾಸಕರುಗಳಾದ ರಾಜು.ಜೆ, ಪ್ರಶಾಂತ್.ಎಂ.ಸಿ ಇವರು ದಿನಾಂಕ:25-10-2017 ರಂದು ಶಾಲೆಗೆ ಭೇಟಿ ನೀಡಿದ್ದರು. ಈ ಶಾಲೆಯಲ್ಲಿ ಕಂಡಂತ ವಿಶೇಷತೆಗಳಿಗೆ, ಈ ಎಲ್ಲಾ ವಿಶೇಷತೆಗಳಿಗೆ ಬೆಂಬಲವಾಗಿ, ಸ್ಫೂರ್ತಿಯಾಗಿರುವ ಮುಖ್ಯಶಿಕ್ಷಕರಾದ ನಾಗಶೆಟ್ಟಿ ರವರಿಗೆ ಪ್ರಾಂಶುಪಾಲರು ಅಭಿನಂದಿಸಿದರು.


ಅಂದ ಹಾಗೆ ಈ ಶಾಲೆಯ ವಿಶೇಷತೆ ಏನಂದ್ರೆ :
·         1 ರಿಂದ 10ನೇ ತರಗತಿವರೆವಿಗೂ ಶಾಲೆಯಲ್ಲಿ ವಿದ್ಯಾರ್ಥೀಗಳಿದ್ದಾರೆ.
·         ಒಂದೇ ಸೂರಿನಡಿ (ಕಟ್ಟಡ ಮಾತ್ರ ಸಂಪೂರ್ಣ ಶಿಥಿಲ) ಮನೆಯ ವಾತಾವರಣವಿದೆ.
·         ಪ್ರಾಥಮಿಕ & ಪ್ರೌಢಶಾಲೆ ಎಂಬ ಬೇದ ದಾಖಲೆಗಳಲ್ಲಿ ಮಾತ್ರ.
·         “ಪರಸ್ಪರ ಪ್ರೀತಿಸ್ವರ” ಈ ಶಾಲೆಯ ಶೀರ್ಷಿಕೆ ಎಂದರೇ ಸರಿ.
·         ಎಲ್ಲರೂ ಎಲ್ಲ ತರಗತಿಗಳಿಗೂ ಸಾಮರ್ಥ್ಯಾನುಸಾರ ನಿರ್ವಹಿಸುತ್ತಾರೆ.
·         ಎಲ್ಲಾ ಮಾಹಿತಿಗಳೂ ತಾಂತ್ರಿಕತೆಯ ಸ್ಪರ್ಶ ಪಡೆದಿವೆ.
·         ಸ್ವಚ್ಛಭಾರತ್, ಸ್ವಸ್ಥ ಭಾರತ್ ಇಲ್ಲಿ ಸಾಕಾರಗೊಳ್ಳುವತ್ತ ಹೆಜ್ಜೆ ಇಟ್ಟಿದೆ.
·         ಮಕ್ಕಳಿಗೆ ಇದು ಪ್ರತಿಷ್ಠಿತ ಶಾಲೆ
·         2017ರ ಮಾರ್ಚ್ ಫಲಿತಾಂಶ ಶೇ.94.73
ಹೀಗೆ ಮುಂದುವರಿಯುತ್ತವೆ.
ನಾನ್ ಐಸಿಟಿ ಶಾಲೆಯಲ್ಲಿ ಐಟಿ @ ಸ್ಕೂಲ್ ಗೆ ಆಗಿರುವ ಸಿದ್ಧತೆಗಳ ಪರಿಶೀಲನೆ ನಡೆಸಲಾಯಿತು. ಹೊಸ ಕಟ್ಟಡಕ್ಕೆ ಶೀಘ್ರವೇ ಈ ದುರಸ್ತಿ ಬಯಸಿರುವ ಕಟ್ಟಡ ಸ್ಥಳಾಂತರಗೊಳ್ಳಲಿದೆ. ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಕೊಠಡಿಗಳು ಅಂತಿಮ ಸ್ಪರ್ಶ ಪಡೆಯುತ್ತಿವೆ.



“ಅತ್ತಿಗೋಡು ಹತ್ತಿನೋಡು” ಈ ಶೀರ್ಷಿಕೆ ಹೊಳೆದದ್ದೇ ಈ ಊರಿಗೆ ಭೇಟಿ ನೀಡಿದ ಮೇಲೆ. ಅಂದು ಇವರ ಶಾಲೆಗೆ ಭೇಟಿ ನೀಡಿ, ಈ ಶಾಲೆಯ ಶಿಕ್ಷಕರ ಕಾರ್ಯವೈಖರಿ ನೋಡಿದ ಮೇಲೆ “ ಹೊಸ ಹೊಸ ಪ್ರಯೋಗಗಳು ನಿಮ್ಮ ಶಾಲೆಯಲ್ಲಿವೆ. ನೀವೆಲ್ಲಾ ಇಷ್ಟು ಕಷ್ಟಪಟ್ಟು ವ್ಯವಸ್ಥಿತವಾಗಿ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಗೆ ಪ್ರೇರಣೆ ನೀಡುತ್ತಿದ್ದೀರಿ. ಹೀಗಿರುವಾಗ ನೀವ್ಯಾಕೆ ಈ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತಿಲ್ಲ. ನಾಗಶೆಟ್ಟರೆ ಮೊದಲು  ದಾಖಲೀಕರಣ ಮಾಡಿ. ಇದಕ್ಕಾಗಿ ಒಂದು ಬ್ಲಾಗ್ ನಾನೇ ಕ್ರಿಯೇಟ್ ಮಾಡಿ ಕೊಡ್ತೀನಿ” ಅಂದೆ. ಆಗಲಿ ಸರ್ ಎಂದರು. “ ಹಾಗಿದ್ದರೆ ತಡವೇಕೆ. ಈಗಲೇ ಮಾಡಿಯೇ ಬಿಡೋಣ” ಎಂದು ಕುಳಿತು ದಿನಾಂಕ:21-02-2017 ರಂದು ಇವರ ಶಾಲೆಯ ಬ್ಲಾಗ್ https://ghsattigodu.blogspot.in/2017/ರಚಿಸಿದೆವು. ಅಂದಿನಿಂದ ಇವರ ಯಶೋಗಾಥೆ ಚುಕುಬುಕು ಬ್ಲಾಗ್ ಯಾನ ಶುರುವಾಗಿದೆ. ಈ ಶಾಲೆಯ ಶಿಕ್ಷಕರಿಗೆ, ಸಾಥ್ ನೀಡುತ್ತಿರುವ ಎಸ್.ಡಿ.ಎಂ.ಸಿ ಅವರಿಗೆ ಆಲ್ ದಿ ಬೆಸ್ಟ್.


Wednesday, 18 October 2017

ಪ್ರಶಿಕ್ಷಣಾರ್ಥಿಗಳ ವಸಂತಯಾನ

ಡಯಟ್ ಎಂದಾಕ್ಷಣ ಶರೀರದ ಏರುಪೇರು ಸರಿಪಡಿಸಲು ಮಾಡುವ ಪಥ್ಯ ಎಂಬುದೇ ಸಾಮಾನ್ಯರ ಭಾವನೆ. ಆದರೆ, ಡಯಟ್ ಅರ್ಥಾತ್  DISTRICT INSTITUTE OF EDUCATION AND TRAINING (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಎಂದರೇನು ಎಂಬ ಪರಿಚಯ ಶಿಕ್ಷಣ ರಂಗದಲ್ಲಿರುವವರಿಗೆ ಮಾತ್ರ ಚಿರಪರಿಚಿತ. ಈ ಶಿಕ್ಷಣದ ಬೆನ್ನುಹತ್ತಿರುವ ಭವಿಷ್ಯದ ಶಿಕ್ಷಕರು ಅರ್ಥಾತ್ ಬಿಇಡಿ ಪ್ರಶಿಕ್ಷಣಾರ್ಥಿಗಳು ಇಂದು ಡಯಟ್ , ವಸಂತಮಹಲ್, ಮೈಸೂರಿಗೆ ಭೇಟಿ ನೀಡಿದ್ದರು. 



16-10-2017 ಮತ್ತು 17-10-2017 ಎರಡು ದಿನಗಳ ಕಾಲ 
1. ಇನ್ಸ್ ಟಿಟ್ಯೂಟ್ ಆಫ್ ಎಜುಕೇಷನ್ 
2. ಸಂತ ಜೋಸೆಫರ ಬಿಇಡಿ ಮಹಾವಿದ್ಯಾಲಯ 
3. ಜೆ.ಎಸ್.ಎಸ್. ಬಿಇಡಿ ಕಾಲೇಜ್ 
4.ಅಮೃತಾನಂದಮಯಿ ಬಿಇಡಿ ಕಾಲೇಜ್ 
5.ಶಾರದಾವಿಲಾಸ್ ಬಿಇಡಿ ಕಾಲೇಜ್ ನ ವಿದ್ಯಾರ್ಥಿಗಳು ಡಯಟ್ ನ ವಸಂತಯಾನದಲ್ಲಿ ವಿಹರಿಸಿದರು.




ಡಯಟ್ ಎಂದರೇನು ? ಇದರ ಕೆಲಸಗಳೇನು ? ಯಾರೆಲ್ಲಾ ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ? ಇವರ ವಿದ್ಯಾರ್ಹತೆಗಳೇನು ? ಏನೇನೆಲ್ಲಾ ಕರ್ತವ್ಯಗಳನ್ನು ಇಲ್ಲಿ ನಿರ್ವಹಿಸುತ್ತಾರೆ ? ಎಷ್ಟೆಲ್ಲಾ ವಿಭಾಗಗಳಿವೆ ? ಯಾವ ವಿಭಾಗದ ಕಾರ್ಯ ಏನು ?  ಏನೆಲ್ಲಾ ದಾಖಲೆಗಳನ್ನು ನಿರ್ವಹಿಸಲಾಗುತ್ತೆ ? ಒಂದು ಜಿಲ್ಲೆಯ ಶೈಕ್ಷಣಿಕ ಮೇಲುಸ್ತುವಾರಿಯನ್ನು, ಶೈಕ್ಷಣಿಕ ಆಡಳಿತ ನಿರ್ವಹಣೆಯನ್ನ ಹೇಗೆ ನಿರ್ವಹಿಸಲಾಗುತ್ತೆ ? ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ನಡೆಯಿತು. 


ಈ ಕಾರ್ಯಾಗಾರದಲ್ಲಿ ತರಗತಿಗಳ ಉಸ್ತುವಾರಿಯನ್ನು
1. ಶ್ರೀನಿವಾಸ್, ಹಿರಿಯ ಉಪನ್ಯಾಸಕರು, ಡಯಟ್,ಮೈಸೂರು
2. ಚಂದ್ರಶೇಖರ್, ಹಿರಿಯ ಉಪನ್ಯಾಸಕರು, ಡಯಟ್,ಮೈಸೂರು
3. ಪುಷ್ಪಲತಾ,ಉಪನ್ಯಾಸಕರು, ಡಯಟ್,ಮೈಸೂರು
4.ತ್ರಿವೇಣಿ,ಉಪನ್ಯಾಸಕರು, ಡಯಟ್,ಮೈಸೂರು
5.ಪ್ರಶಾಂತ್.ಎಂ.ಸಿ, ಉಪನ್ಯಾಸಕರು, ಡಯಟ್,ಮೈಸೂರು
ಇವರು ವಹಿಸಿಕೊಂಡು ನಿರ್ವಹಿಸಿದರು.


Wednesday, 11 October 2017

ಗುರುಚೇತನ ಕಾರ್ಯಗಾರ

ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನಿರೀಕ್ಷೆಗಳನ್ನು ಈಡೇರಿಸುವ ಶಿಕ್ಷಕರ ಕಾರ್ಯದಕ್ಷತೆಯ ಮೇಲೆ ಶಿಕ್ಷಣ ಇಲಾಖೆ ಅತೀವ ನಂಬಿಕೆಯನ್ನಿರಿಸಿದೆ. ಶಿಕ್ಷಕರಲ್ಲದೆ ಇನ್ನಾರಿಗೂ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಸಾಧ್ಯವಾಗದು. ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಾಗಿ ಈ ದೇಶದ ಭವಿಷ್ಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ರೂಪಿಸುವವರು. ಇಲಾಖೆಯ ಹಾಗೂ ಭಾಗಿದಾರ ಪೋಷಕರ ನಡುವೆ ಜ್ಞಾನ ಸೇತುವೆಯಾಗಿ ಅಸಾಧಾರಣ ಸಂದರ್ಭಗಳಲ್ಲಿಯೂ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವರು. ಅಂತಹ ಸಮರ್ಥ ಶಿಕ್ಷಕರ ಪಡೆಯನ್ನು ಹೊಂದುವುದೇ ನಮ್ಮ ರಾಜ್ಯದ ಕನಸು. ಶಿಕ್ಷಕರು ವ್ಯಕ್ತಿ-ಶಕ್ತಿಯಾಗಿ ರೂಪುಗೊಳ್ಳುತ್ತ ಶಿಕ್ಷಣದ ಬೆನ್ನೆಲುಬಾಗಿ ಸಮಗ್ರ ಗುರಿಯ ಕಡೆಗೆ ಹೆಜ್ಜೆಯಿರಿಸಬೇಕೆಂಬುದೇ ಶಿಕ್ಷಣ ಇಲಾಖೆಯ ಆಶಯ. 

ಈ ಹಿನ್ನೆಲೆಯಲ್ಲೇ ರೂಪುಗೊಂಡ ಇಲಾಖೆಯ ಕನಸಿನ ಕೂಸು "ಗುರುಚೇತನ"  ಈ ಗಾಗಲೇ ಇದರ ರೂಪುರೇಷೆ ಸಿದ್ಧಗೊಂಡಿದೆ.  ಉದ್ದೇಶಗಳು ಇಂತಿವೆ.


  • ಶಿಕ್ಷಕರನ್ನು ಚಿಂತನಶೀಲ ಅಭ್ಯಾಸಿಗರನ್ನಾಗಿ (Reflective Practitioner) ಮಾಡುವುದು
  • ಶಿಕ್ಷಕರು ಸ್ವ ಪ್ರೇರಣೆಯಿಂದ ವೃತ್ತಿಪರ ಅಭಿವೃಧ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಕಲ್ಪಿಸುವುದು
  • ಮಕ್ಕಳ ಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ ಶಿಕ್ಷಕರನ್ನು ರೂಪಿಸುವುದು

  • ಕಾರ್ಯಕ್ರಮದ ವಿಶೇಷತೆಗಳು


  • ಪ್ರಥಮ ಬಾರಿಗೆ ಶಿಕ್ಷಕರ ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಎನ್ನಬಹುದಾದ ಶಿಕ್ಷಕರ ಆಯ್ಕೆ ಆಧಾರಿತ ಅಭಿವೃದ್ಧಿಗೆ ಅವಕಾಶ. ಶಿಕ್ಷಕರು ತಮ್ಮ ವೃತ್ತಿ ಬೆಳವಣಿಗೆಯ ಅಗತ್ಯ ಹಾಗೂ ಆಸಕ್ತಿಗೆ ತಕ್ಕ ಮಾಡ್ಯೂಲ್‍ಗಳನ್ನು ಆಯ್ಕೆ ಮಾಡಿಕೊಂಡು ಭಾಗವಹಿಸುವ ಅವಕಾಶವಿದೆ.
  • ಧೀರ್ಘಾಕಾಲದಲ್ಲಿ ಶಿಕ್ಷಕರ ಅಭಿವೃದ್ಧಿಯನ್ನು ಯೋಜಿಸಲು ನೆರವಾಗಲು “ಶಿಕ್ಷಕರ ಅಭಿವೃದ್ಧಿ ಪಠ್ಯಕ್ರಮ”ವನ್ನು ಇಲಾಖೆ ರೂಪಿಸಿದೆ, ಅದರಲ್ಲಿ ಶಿಕ್ಷಕರ ಅಭಿವೃದ್ಧಿಗೆ ಮುಂದಿನ 3-5ವರ್ಷಗಳಿಗೆ ಅಗತ್ಯವಾದ ಥೀಮ್‍ಗಳನ್ನು ಗುರುತಿಸಿದೆ.
  • ಆರಂಭಿಕಾಗಿ 2017-18ನೇ ಸಾಲಿನಲ್ಲಿ 28 ಮಾಡ್ಯೂಲ್‍ಗಳನ್ನು ಅಭಿವೃದ್ಧಿ ಮಾಡಲಾಗಿದೆ, ಶಿಕ್ಷಕರು ಅವುಗಳಲ್ಲಿ ಆದ್ಯತೆಯ ಮೇರೆಗೆ ನಾಲ್ಕನ್ನು ಗುರುತಿಸುವ ಅವಕಾಶವಿದೆ.
  • ಶಿಕ್ಷಕರು ಮಾಡ್ಯೂಲ್ ಆಯ್ಕೆ ಸಂದರ್ಭದಲ್ಲಿ ಅವರು ಬೋಧಿಸುವ ವಿಷಯಕ್ಕೆ ಸೀಮಿತವಾಗದೆ, ಅವರ ಆಸಕ್ತಿ ಹಾಗೂ ಅಗತ್ಯತೆ ಇರುವ ಯಾವುದೇ ಮಾಡ್ಯೂಲ್‍ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ.
  • ನೀಡಲಾದ ಆದ್ಯತೆಯ ನಾಲ್ಕರಲ್ಲಿ 2 ಮಾಡ್ಯೂಲ್‍ಗಳ 2 ಅವಧಿಯ ಒಟ್ಟು 10 ದಿನಗಳ ಕಾರ್ಯಗಾರದಲ್ಲಿ ಭಾಗವಹಿಸುವ ಅವಕಾಶವಿದೆ.
  • 2017-18ನೇ ಸಾಲಿನಲ್ಲಿ 50,000 ಶಿಕ್ಷಕರು ಇದರ ಪ್ರಯೋಜನ ಪಡೆಯಲಿದ್ದಾರೆ.
  • ವಿಷಯ ಪರಿಕರ, ಸಂಶೋಧನೆ ಮತ್ತು ವಿವಿಧ ಜ್ಞಾನಕ್ಷೇತ್ರಗಳ ಸಮಗ್ರತೆಯ ಆಶಯಹೊಂದಿದ ಮಾಡ್ಯೂಲ್‍ಗಳನ್ನು ಕಾರ್ಯಾಗಾರದ ಪೂರ್ವದಲ್ಲೇ ಅಧ್ಯಯನ ಮಾಡಲು ವೆಬ್‍ಸೈಟ್‍ನಲ್ಲಿ ಅಳವಡಿಸಲಾಗಿದೆ.
  • ಕಾರ್ಯಗಾರಗಳು ವಿಕೇಂದ್ರಿಕೃತ, ಸಹವರ್ತಿ, ಸುಸ್ಥಿರ ಸ್ವಕಲಿಕೆಯ ಅವಕಾಶವನ್ನು ಪಾಲ್ಗೊಳ್ಳುವ ಶಿಕ್ಷಕರಿಗೆ ಒದಗಿಸುತ್ತವೆ.
  • ಶಿಕ್ಷಕರು ತಂಡವಾಗಿ ನಿರಂತರ ಕಲಿಕೆಯ ಸಂಸ್ಕøತಿಯನ್ನು ಹುಟ್ಟುಹಾಕುವ ಮೂಲಕ ಸಮಥ ಶಿಕ್ಷರನ್ನು ಅಭಿವೃದ್ಧಿಗೊಳಿಸುವ ಆಶಯ ಹೊಂದಿದೆ.
  • ಕಾರ್ಯಗಾರಗಳು ನಡೆಯುವ ಸ್ಥಳ ಹಾಗೂ ದಿನಾಂಕಗಳನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪೂರ್ವಭಾವಿಯಾಗಿ ಪ್ರಕಟಿಸಲಾಗುತ್ತದೆ. ಶಿಕ್ಷಕರು ಮಾಡ್ಯೂಲ್ ಆಯ್ಕೆ ನಂತರ ಬ್ಯಾಚ್ ಫಾರಂ ಆದ ಮೇಲೆ ಕಾರ್ಯಾಗಾರ ನಡೆಯುವ ದಿನಾಂಕ ಮತ್ತು ಸ್ಥಳದ ಬಗ್ಗೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಸಂದೇಶ ರವಾನೆಯಾಗುತ್ತದೆ.

  • ಗುರುಚೇತನದ ಸಂಪೂರ್ಣ ವಿವರವನ್ನು ಈ ಲಿಂಕ್ ಮೂಲಕ ನೀವು ಪಡೆಯಬಹುದು. http://dsert.kar.nic.in/guruchethana/



    ಈಗಾಗಲೇ ಎಂ.ಆರ್.ಪಿ ತರಬೇತಿ ಪಡೆದು ಬಂದ ಮೈಸೂರು ಜಿಲ್ಲೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ನಮ್ಮ ಜಿಲ್ಲೆಯಲ್ಲಿ ಈ ಕನಸನ್ನು ಹೇಗೆ ನನಸಾಗಿಸಬೇಕೆಂದು ತಾವೂ ಒಂದು ಕನಸು ಕಂಡರು. ಈ ಕನಸಿಗೆ ದಿನಾಂಕ:12-09-2017 ರಂದು ಡಯಟ್, ಮೈಸೂರು ವೇದಿಕೆ ಕಲ್ಪಿಸಿತ್ತು.

    NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

         NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...